🟥 ಟಿ ಪಬ್ಲಿಕ್ ನ್ಯೂಸ್ | ಬಳ್ಳಾರಿ
ದಿನಾಂಕ: 27/07/2026
ಬಳ್ಳಾರಿ: ಬಳ್ಳಾರಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿರುವ ದೇಸಿ ಕಲೆ ಬಯಲಾಟದ ಉಳಿವಿಗೆ ಸರ್ಕಾರದಿಂದ ಸರ್ವ ಪ್ರಯತ್ನ ನಡೆಯಲಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ ಭರವಸೆ ನೀಡಿದರು.

ಅವರು ಇಲ್ಲಿನ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ವಿಶ್ವನಾಥ ಸಾಹುಕಾರ ನೇತೃತ್ವದಲ್ಲಿ ಜರುಗಿದ ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕಲಾವಿದರಲ್ಲಿ ಆತಂಕ ಬೇಡ, ನಿಮ್ಮ ಬೇಡಿಕೆಗಳ ಮನವಿ ಸಲ್ಲಿಸಿ, ಶತಪ್ರಯತ್ನ ಮಾಡಿ ಸರ್ಕಾರದಿಂದ ಪರಿಹರಿಸಲಾಗುವುದು. ಮಾಸಾಶನ, ಪ್ರಶಸ್ತಿ ತಾರತಮ್ಯ, ಅನುದಾನ ತಾರತಮ್ಯ, ರಂಗಮಂದಿರ ದುರಸ್ತಿ ಸೇರಿದಂತೆ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡಿಕೊಡಲು ಸರ್ಕಾರ ಸಿದ್ಧವಿದೆ ಎಂದರು.
ಹಿರಿಯ ಕಲಾವಿದರ ಸಂಘದ ಅಧ್ಯಕ್ಷ ಡಾ. ಪಿ.ಆರ್. ಗಾದಿಲಿಂಗನಗೌಡ ಮಾತನಾಡಿ, ಕಲಾವಿದರಿಗೆ ಅಗತ್ಯ ಆರ್ಥಿಕ ನೆರವು ನೀಡಲಿದ್ದು, ದಾಸೋಹ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಿ ನಿಮ್ಮೊಂದಿಗೆ ಸದಾ ಪೋಷಕರಾಗಿರುವುದಾಗಿ ಘೋಷಿಸಿದರು.
ಹಿರಿಯ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಮಾತನಾಡಿ, ಬಯಲಾಟ ಕಲೆ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಸಿನಿಮಾ ಹಾಡುಗಳನ್ನು ಸೇರಿಸುವ ಮೂಲಕ ಅದರ ಸ್ವಾರಸ್ಯ ಹಾಳಾಗುತ್ತಿದ್ದು, ಇದು ನಿಲ್ಲಬೇಕು. ಬಯಲಾಟದ ಗಟ್ಟಿತನ ಉಳಿಸಿಕೊಂಡು ಬಳ್ಳಾರಿಯಲ್ಲಿ ಅದರ ಗತವೈಭವವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದು ಕಿವಿಮಾತು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ ಬರುವ ಯೋಜನೆಗಳನ್ನು ಕಲಾವಿದರಿಗೆ ತಲುಪಿಸುವುದಾಗಿ ತಿಳಿಸಿದರು.
ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ನೂತನ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಬಯಲಾಟದ ಪ್ರತಿಗಳು ಮುದ್ರಣದ ರೂಪ ಕಾಣದೆ ನಾಪತ್ತೆಯಾಗುತ್ತಿದ್ದು, ಅವುಗಳನ್ನು ಸಂಗ್ರಹಿಸಿ ಮುದ್ರಣ ಮಾಡಿಸಿ ಕಲಾವಿದರಿಗೆ ಕನಿಷ್ಠ ಬೆಲೆಗೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯಲ್ಲಿ ಕರ್ನಾಟಕ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ, ಬಯಲಾಟದ ಹಿರಿಯ ನಿರ್ದೇಶಕರಾದ ವೀರನಗೌಡ ಮುದ್ದಟನೂರು, ರಂಗಾರೆಡ್ಡಿ, ಪಂಪಯ್ಯಸ್ವಾಮಿ, ಪ್ರಥಮ ದರ್ಜೆ ಗುತ್ತಿಗೆದಾರ ಮಸುದಿಪುರ ಸಿದ್ರಾಮ ಗೌಡ್ರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
500ಕ್ಕೂ ಹೆಚ್ಚು ರಂಗಗೀತೆಗಳನ್ನು ಬರೆದು ರಾಗಸಂಯೋಜಿಸಿರುವ ವೀರನಗೌಡ ಮುದ್ದಟನೂರು ಅವರಿಗೆ ದೊಡ್ಡಾಟ ರಂಗ ಪ್ರಶಸ್ತಿ, ದೊಡ್ಡಾಟದ ಕವಿ ಸೋಮಶೇಖರ್ ಚಿಟಿಗಿನಾಳ ಅವರಿಗೆ ಅಯೋಧ್ಯರಾಮಯ್ಯ ಪ್ರಶಸ್ತಿ, ಜೀವನ್ ಕುಮಾರ್ ಕುಡಿತಿನಿ ಅವರಿಗೆ ಪರಿಸರ ಜ್ಞಾನಿ ಪ್ರಶಸ್ತಿ, ಮಹಿಳಾ ವೃತ್ತಿ ಕಲಾವಿದರಾದ ಅಂಬುಜಮ್ಮ ಅವರಿಗೆ ಕಲಾರತ್ನ ಪ್ರಶಸ್ತಿ, ಗೀತಾ ಅವರಿಗೆ ಜಾನಪದ ಕೋಗಿಲೆ ಪ್ರಶಸ್ತಿ, ಶಶಿಕಲಾ ಅವರಿಗೆ ಮಾತಾ ಸೀತಾ ಪ್ರಶಸ್ತಿ, ಚಾಮುಂಡೇಶ್ವರಿ ಅವರಿಗೆ ಗಾನ ಕೋಗಿಲೆ ಪ್ರಶಸ್ತಿ, ಪವಿತ್ರ ಅವರಿಗೆ ಬಯಲಾಟ ರತ್ನ ಪ್ರಶಸ್ತಿ, ಮೀನಾಕ್ಷಿ ಅವರಿಗೆ ಜಾನಪದ ರತ್ನ ಪ್ರಶಸ್ತಿ, ಕಮಲಮ್ಮ ಅವರಿಗೆ ಜಾನಪದ ಸರಸ್ವತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅನೇಕ ಕಲಾತಂಡಗಳು ಅತ್ಯುತ್ತಮ ಬಯಲಾಟ ಪ್ರದರ್ಶನ ನೀಡಿ ಜನಮನ ಸೂರೆಗೊಂಡವು.
ಬೆಳಗ್ಗೆ 10 ಗಂಟೆಗೆ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಬಯಲಾಟದ ವಿವಿಧ ವೇಷಭೂಷಣಗಳು, ಗೊಂಬೆ ಕುಣಿತ, ತಾಳಮದ್ದಳೆ, ನಂದಿಕೋಲು ಕುಣಿತಗಳು ವಿಶೇಷ ಆಕರ್ಷಣೆಯಾಗಿದ್ದವು. ನೂರಾರು ಕಲಾವಿದರು, ಸಂಗೀತ ನಿರ್ದೇಶಕರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳು ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಅಧ್ಯಕ್ಷರನ್ನು ನೇಮಿಸಿ ಆದೇಶ ಪ್ರತಿಗಳನ್ನು ವಿತರಿಸಲಾಯಿತು.
ಪ್ರಥಮ ಪ್ರಯತ್ನದಲ್ಲೇ ಹಲವು ಅಡೆತಡೆಗಳ ನಡುವೆಯೂ ಕರ್ನಾಟಕ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ ಅವರು ರಾಜ್ಯಮಟ್ಟದ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿ ಸಾಕಷ್ಟು ಜನಮನ್ನಣೆ ಗಳಿಸಿದರು. ಅಸಂಘಟಿತ ಕಲಾವಿದರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿ ಸೈ ಎನಿಸಿಕೊಂಡರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ವತಿಯಿಂದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ