October 16, 2026

“ನ್ಯಾಯಬೆಲೆ ಅಂಗಡಿಗಳಲ್ಲಿ ಟಿಕೆಟ್ ಮಾರಾಟದ ಆರೋಪ ಪಡಿತರ ವಿತರಕರ ಸಂಘ ಸ್ಪಷ್ಟನೆ”

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ ದಿನಾಂಕ: 29/07/2026 ಗಂಗಾವತಿ: ನ್ಯಾಯಬೆಲೆ ಅಂಗಡಿಗಳ ಮೂಲಕ “ನ್ಯಾಯ ಬೆಲೆ ಅಂಗಡಿ”…

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 29/07/2026

ಗಂಗಾವತಿ: ನ್ಯಾಯಬೆಲೆ ಅಂಗಡಿಗಳ ಮೂಲಕ “ನ್ಯಾಯ ಬೆಲೆ ಅಂಗಡಿ” ಚಲನಚಿತ್ರದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಈ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಸರ್ಕಾರಿ ಪಡಿತರ ವಿತರಕರ ಸಂಘದ ತಾಲೂಕು ಅಧ್ಯಕ್ಷ ಕೆ. ಮಂಜುನಾಥ ಸ್ಪಷ್ಟಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅಭಿನಯಿಸಿರುವ “ನ್ಯಾಯ ಬೆಲೆ ಅಂಗಡಿ” ಚಿತ್ರವು ಜುಲೈ 31ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಎದುರಿಸುವ ಸಮಸ್ಯೆಗಳು, ಕೋವಿಡ್ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಬಡ ಜನರಿಗೆ ನೀಡುತ್ತಿರುವ ಕೊಡುಗೆಯನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ ಎಂದು ತಿಳಿಸಿದರು.

ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಟಿಕೆಟ್ ಮಾರಾಟಕ್ಕೆ ಒತ್ತಡ ಹೇರಿಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಟಿಕೆಟ್ ಮಾರಾಟ ಮಾಡುವ ಪ್ರಶ್ನೆಯೇ ಇಲ್ಲ. ಸಂಘದ ಸದಸ್ಯರು ಹಾಗೂ ಅವರ ಕುಟುಂಬದವರು ಚಿತ್ರ ವೀಕ್ಷಿಸುವಂತೆ ಮಾತ್ರ ಮನವಿ ಮಾಡಲಾಗಿದೆ. ಪಡಿತರ ಚೀಟಿದಾರರ ಮೇಲೆ ಯಾವುದೇ ರೀತಿಯ ಒತ್ತಡ ಹೇರಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಟಿ.ಎಂ. ಚನ್ನಬಸವಶಾಸ್ತ್ರಿ, ಉಪಾಧ್ಯಕ್ಷ ಎಂ.ಪಿ. ಪಂಪನಗೌಡ, ಕಾರ್ಯದರ್ಶಿ ಎಂ.ಡಿ. ಫಯಾಜ್, ಸಹ ಕಾರ್ಯದರ್ಶಿ ಎಚ್. ವೀರಭದ್ರಪ್ಪ, ಖಜಾಂಚಿ ಬಿ. ರಾಜಶೇಖರ, ನಿರ್ದೇಶಕ ವಾಜೇಂದ್ರರಾವ್ ದೇಶಪಾಂಡೆ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!