🟥 ಟಿ ಪಬ್ಲಿಕ್ ನ್ಯೂಸ್ | ಕುಷ್ಟಗಿ
ದಿನಾಂಕ: 31/07/2026
ಕುಷ್ಟಗಿ: ಶ್ರೀಮತಿ ಪಾರ್ವತೆಮ್ಮ ಬಸನಗೌಡ ಎಜುಕೇಷನಲ್ ಮತ್ತು ರೂರಲ್ ಡೆವಲಪ್ಮೆಂಟ್ ಟ್ರಸ್ಟ್, ತಿಪ್ಪನಾಳ ಇವರ ವತಿಯಿಂದ ಕುಷ್ಟಗಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಕೇಂದ್ರ ಸರ್ಕಾರ ಪ್ರಾಯೋಜಿತ ರಾಷ್ಟ್ರೀಯ ಆದಾಯ ಹಾಗೂ ಅರ್ಹತಾ ಆಧಾರಿತ ಶಿಷ್ಯವೇತನ (ಎನ್‌ಎಂಎಂಎಸ್) ಪರೀಕ್ಷೆಯ ಪೂರ್ವಸಿದ್ಧತೆಗಾಗಿ ಒಂದು ದಿನದ ಉಚಿತ ತರಬೇತಿ ಕಾರ್ಯಗಾರವನ್ನು ಶುಕ್ರವಾರ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಶಾಲೆಯ ಉಪಪ್ರಾಂಶುಪಾಲರಾದ ಶಿವಪ್ಪ ವೈ. ಎಂ. ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎನ್‌ಎಂಎಂಎಸ್ ಶಿಷ್ಯವೇತನ ಪರೀಕ್ಷೆಯನ್ನು ನಡೆಸುತ್ತಿದೆ. ಟ್ರಸ್ಟ್ ಉಚಿತವಾಗಿ ನೀಡುತ್ತಿರುವ ಈ ತರಬೇತಿಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಹುಸೈನ್ ಸಾಬ್ ಕೋಳೂರ, ಇಂದಿನ ದಿನಗಳಲ್ಲಿ ಇಂತಹ ತರಬೇತಿಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗಿರುವ ಸಂದರ್ಭದಲ್ಲಿ ಉಚಿತವಾಗಿ ತರಬೇತಿ ನೀಡುತ್ತಿರುವ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಕಿ ಶ್ರೀಮತಿ ವಾರದ ಅವರು ಎನ್‌ಎಂಎಂಎಸ್ ಪರೀಕ್ಷೆಯ ಅವಧಿ, ವಿಷಯಗಳು ಹಾಗೂ ಪ್ರಶ್ನೆಪತ್ರಿಕೆಯ ಸ್ವರೂಪದ ಕುರಿತು ವಿದ್ಯಾರ್ಥಿನಿಯರಿಗೆ ವಿವರವಾಗಿ ಮಾಹಿತಿ ನೀಡಿದರು.
ಟ್ರಸ್ಟ್‌ನ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ ಗೌಡ ಅವರು ಸುಮಾರು ಎರಡು ಗಂಟೆಗಳ ಕಾಲ ಪರಿಣಾಮಕಾರಿ ತರಬೇತಿ ನಡೆಸಿ, ಪರೀಕ್ಷಾ ತಯಾರಿಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು, ಒಟ್ಟು 152 ವಿದ್ಯಾರ್ಥಿನಿಯರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ