🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 04/08/2026
ಗಂಗಾವತಿ: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ವಿಧಿಸಿರುವ ವಾರ್ಷಿಕ ₹32 ಸಾವಿರ ಆದಾಯ ಮಿತಿಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹ್ಮದ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ದಾಖಲೆಗಳ ಬೇಡಿಕೆ, ವಿಳಂಬ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಗೃಹಜ್ಯೋತಿ ಫಲಾನುಭವಿಗಳಿಗೆ ಮರುಅರ್ಜಿ ಹಾಗೂ ದಾಖಲೆಗಳ ಒತ್ತಾಯ, ಗೃಹಲಕ್ಷ್ಮಿ ಯೋಜನೆಯ ಹಣ ನಿಯಮಿತವಾಗಿ ಜಮೆಯಾಗದಿರುವುದು ಮತ್ತು ಪಿಂಚಣಿ ಫಲಾನುಭವಿಗಳಿಗೆ ಹೊಸದಾಗಿ ದಾಖಲೆ ಸಲ್ಲಿಸುವಂತೆ ಸೂಚಿಸಿರುವುದು ಜನರಿಗೆ ತೊಂದರೆ ಉಂಟುಮಾಡುತ್ತಿದೆ ಎಂದರು.
ವಯೋವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ನಿರ್ಗತಿಕರ ಪಿಂಚಣಿಗೆ ₹32 ಸಾವಿರ ಆದಾಯ ಮಿತಿ ಇಂದಿನ ಆರ್ಥಿಕ ಪರಿಸ್ಥಿತಿಗೆ ಅಸಂಗತವಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಮಿತಿಯನ್ನು ರದ್ದುಪಡಿಸಿ, ಅರ್ಹ ಫಲಾನುಭವಿಗಳಿಗೆ ಯಾವುದೇ ಅನಗತ್ಯ ದಾಖಲೆಗಳ ಕಿರಿಕಿರಿ ಇಲ್ಲದೆ ಯೋಜನೆಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಹಣ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೊಸ ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸಲೀಂ ಮನಿಯಾರ್, ಪ್ರಧಾನ ಕಾರ್ಯದರ್ಶಿ ಸೈಯದ್ ಸಾಹಿಲ್, ಕೋಶಾಧಿಕಾರಿ ಮಹೆಬೂಬ್ ರಹ್ಮಾನ್, ತಾಲೂಕು ಅಧ್ಯಕ್ಷ ಚಾಂದ್ ಸಲ್ಮಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಈದ್ ಮಿಲಾದ್ ಹಬ್ಬ: ಸೌಹಾರ್ದತೆ ಕಾಪಾಡಲು ಪೊಲೀಸರ ಮನವಿ
ಗಂಗಾವತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಲು ಸಿಪಿಐ ಆಗ್ರಹ
ಗುತ್ತಿಗೆ ಪದ್ಧತಿ ರದ್ದುಪಡಿಸಲು ಒತ್ತಾಯಿಸಿ ಆ.20ರಂದು ಬೆಂಗಳೂರು ಚಲೋ