August 21, 2026

ಶಿಕ್ಷಣವೇ ಅಜ್ಞಾನ, ಅಂಧಕಾರ ನಿವಾರಿಸುವ ಶಕ್ತಿ: ಬಿಇಒ ನಟೇಶ್

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 13/08/2026

ಗಂಗಾವತಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣದ ಮೂಲಕ ಅಜ್ಞಾನ, ಅಂಧಕಾರ ಹಾಗೂ ಮೂಢನಂಬಿಕೆಗಳನ್ನು ದೂರ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಕರೆ ನೀಡಿದರು.

ಗುರುವಾರ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ದಲಿತ ಸೇನೆ ವತಿಯಿಂದ ಶ್ರೀರಾಮನಗರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ 300ಕ್ಕೂ ಅಧಿಕ ಜಾಮಿಟ್ರಿ ಬಾಕ್ಸ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಖಾಸಗಿ ಶಾಲೆಗಳ ಪೈಪೋಟಿಯಿಂದ ಹಲವು ಸರ್ಕಾರಿ ಶಾಲೆಗಳು ಸವಾಲು ಎದುರಿಸುತ್ತಿರುವ ಸಂದರ್ಭದಲ್ಲಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಮೂಲಕ ದಲಿತ ಸೇನೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಶ್ರೀರಾಮನಗರ, ಹುಲಕಿಹಾಳ್, ಪ್ರಗತಿನಗರ, ಮರಳಿ, ವಿನೋಬನಗರ ಹಾಗೂ ಈಳಗನೂರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಶಿಕ್ಷಣದ ಮೇಲಿನ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯ ಪ್ರತೀಕವಾಗಿದೆ ಎಂದು ನಟೇಶ್ ಹೇಳಿದರು.

ಶಿಕ್ಷಣವೇ ಶಕ್ತಿ, ಶಿಕ್ಷಣವೇ ಶಸ್ತ್ರ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೆ, ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ಒದಗಿಸುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ದಲಿತ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷ ಉಡಚಪ್ಪ ತಿಳಿಸಿದರು.

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ಸೇರಿದಂತೆ ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು. ಶಿಕ್ಷಣ ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ಅಭಿವೃದ್ಧಿಯೇ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲ ವೀರೇಶ್, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ನಾಯಕ್, ಶಿವಕುಮಾರ್ ಡಿ., ಗೋಪಾಲ್ ವಕೀಲರು, ಗಂಗಾವತಿ ತಾಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಉಳಿನೂರ್ ಸೇರಿದಂತೆ ವೆಂಕೋಬ, ನರೇಶ್, ಗಣೇಶ್, ರಾಜು, ಶಿವು, ಶರಣಪ್ಪ, ಸುರೇಶ್, ಮಂಜುನಾಥ್, ಕೃಷ್ಣ, ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News