August 21, 2026

ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಕರವೇ ಯುವ ಗಜ ವೇದಿಕೆ ಪ್ರತಿಭಟನೆ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿದಿನಾಂಕ: 14/08/2026 ಗಂಗಾವತಿ: ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ತಮಿಳುನಾಡಿಗೆ ಪ್ರತಿದಿನ 12…

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 14/08/2026

ಗಂಗಾವತಿ: ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸೆಕ್ಸ್ ನೀರನ್ನು 15 ದಿನಗಳ ಕಾಲ ಹರಿಸುವಂತೆ ನೀಡಿರುವ ಆದೇಶವನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ ಯುವ ಗಜ ವೇದಿಕೆ ವತಿಯಿಂದ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಖಾಸೀ ಅಲಿ ಮಾತನಾಡಿ, ತಮಿಳುನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರನ್ನು ರಾಜ್ಯದ ಹಲವು ಭಾಗಗಳ ರೈತರು ಹಾಗೂ ಜನರು ಕುಡಿಯಲು ಮತ್ತು ಕೃಷಿಗೆ ಅವಲಂಬಿಸಿದ್ದಾರೆ. ಹೀಗಾಗಿ ನೀರು ಹಂಚಿಕೆ ಕುರಿತು ಸಮಗ್ರ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಆದರೆ ಏಕಪಕ್ಷೀಯವಾಗಿ ಆದೇಶ ನೀಡಿರುವುದು ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ತಡೆಹಿಡಿಯಬೇಕು. ಯಾವುದೇ ಒತ್ತಡ ಬಂದರೂ ಕಾನೂನು ಹೋರಾಟದ ಮೂಲಕ ರಾಜ್ಯದ ರೈತರಿಗೆ ಆಗುವ ನಷ್ಟವನ್ನು ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ನಂತರ ಪ್ರತಿಭಟನಾಕಾರರು ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಖಾಜಾವಲಿ ಎಚ್., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮಣ್ಣ, ಗಂಗಾವತಿ ತಾಲೂಕು ಅಧ್ಯಕ್ಷ ರಾಕೇಶ್, ಸಂಘಟನಾ ಸಹ ಕಾರ್ಯದರ್ಶಿ ಬೀರಪ್ಪ, ಜಿಲ್ಲಾ ಉಪಾಧ್ಯಕ್ಷ ಪ್ರಭು, ಇಮಾಮ್ ಸೇರಿದಂತೆ ತಾಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News