October 16, 2026

ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ: ಮಹಾಂತಗೌಡ ಪಾಟೀಲ್

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 01/09/2026

ಗಂಗಾವತಿ: ಇಂದಿನ ಡಿಜಿಟಲ್ ಹಾಗೂ ಎಐ ಯುಗದಲ್ಲಿ ಪ್ರತಿಯೊಬ್ಬರೂ ಕಂಪ್ಯೂಟರ್ ಜ್ಞಾನ ಹೊಂದುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಪ್ರೌಢ ಶಿಕ್ಷಣದ ಹಂತದಲ್ಲಿಯೇ ಕಂಪ್ಯೂಟರ್ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ಅರಿವು ಕೇಂದ್ರದಲ್ಲಿ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗಾಗಿ ಸೆ.1ರಿಂದ 30ರವರೆಗೆ ಹಮ್ಮಿಕೊಂಡಿರುವ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಂಪ್ಯೂಟರ್ ಕಲಿಯಲು ಮಕ್ಕಳು ನಗರ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿ ಇದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಉಚಿತ ತರಬೇತಿ ಆಯೋಜಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ಮಾತನಾಡಿ, ತರಬೇತಿಯಲ್ಲಿ ಕಂಪ್ಯೂಟರ್‌ನ ಮೂಲಭೂತ ಜ್ಞಾನ, ಎಂ.ಎಸ್‌. ಆಫೀಸ್‌, ಇಂಟರ್‌ನೆಟ್ ಬಳಕೆ, ಟೈಪಿಂಗ್, ಆನ್‌ಲೈನ್ ಸೇವೆಗಳು ಸೇರಿದಂತೆ ಉದ್ಯೋಗಕ್ಕೆ ಅಗತ್ಯವಾದ ವಿವಿಧ ಕಂಪ್ಯೂಟರ್ ಕೌಶಲ್ಯಗಳನ್ನು ಕಲಿಸಲಾಗುವುದು. 14ರಿಂದ 24 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಸುಮಿತ್ರಾ ಮೆಣಸಿಕಾಯಿ ಮಾತನಾಡಿ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯ ಪ್ರಯೋಜನ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ರಾಮಚಂದ್ರಪ್ಪ, ಅರಿವು ಕೇಂದ್ರದ ಮೇಲ್ವಿಚಾರಕ ವೀರೇಶ, ಟಾಟಾ ಟ್ರಸ್ಟ್ ಕಲಿಕಾ ಕೇಂದ್ರದ ಗ್ರಾಮದ ಪ್ರೇರಕಿ ಸುಷ್ಮಾ ಸೇರಿದಂತೆ ಗ್ರಾಪಂ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!