October 16, 2026

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಆರ್ಥಿಕ ನೆರವು: ರೆಡ್ಡಿ ಶ್ರೀನಿವಾಸ್

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 04/09/2026

ಗಂಗಾವತಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಸೇರಿದಂತೆ ವಿವಿಧ ಗ್ಯಾರಂಟಿ ಯೋಜನೆಗಳು ಜನರಿಗೆ ವರದಾನವಾಗಿವೆ ಎಂದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3.20 ಲಕ್ಷ ಫಲಾನುಭವಿಗಳಿದ್ದು, ಇದುವರೆಗೆ ₹62 ಕೋಟಿ ನೆರವು ನೀಡಲಾಗಿದೆ. ಗಂಗಾವತಿ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 56 ಸಾವಿರ ಫಲಾನುಭವಿಗಳಿಗೆ ₹11 ಕೋಟಿ ಹಣ ನೀಡಲಾಗುತ್ತಿದ್ದು, ಒಟ್ಟು 32 ಕಂತುಗಳಲ್ಲಿ ಹಣ ವಿತರಿಸಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಡ ಕುಟುಂಬಗಳು ಔಷಧ ಖರೀದಿ, ಸ್ವಯಂ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಮೃತಪಟ್ಟ ಸುಮಾರು 7 ಸಾವಿರ ಫಲಾನುಭವಿಗಳ ಖಾತೆಗಳಿಗೆ ₹2.44 ಕೋಟಿ ಜಮೆಯಾಗಿದ್ದು, ಈ ಪೈಕಿ ₹90 ಲಕ್ಷ ವಸೂಲಿ ಮಾಡಲಾಗಿದೆ. ಇನ್ನೂ ₹1.30 ಕೋಟಿ ವಸೂಲಿ ಬಾಕಿಯಿದ್ದು, ಹಣ ಮರುಪಡೆಯುವ ಕ್ರಮ ಮುಂದುವರಿದಿದೆ ಎಂದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ₹40 ಕೋಟಿಗೂ ಅಧಿಕ ಹಣ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಗಂಗಾವತಿ ತಾಲೂಕಿನಲ್ಲಿ 64,380 ಪಡಿತರ ಚೀಟಿಗಳಿದ್ದು, 2,27,336 ಫಲಾನುಭವಿಗಳು ಅಕ್ಕಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಶಕ್ತಿ ಯೋಜನೆಯ ಬಳಕೆಯಲ್ಲಿ ಗಂಗಾವತಿ ಮುಂಚೂಣಿಯಲ್ಲಿದ್ದು, ರಾಜ್ಯದ ಬಸ್ ಸಮಸ್ಯೆ ಪರಿಹರಿಸಲು 60 ಹೊಸ ಬಸ್‌ಗಳು ಬರಲಿವೆ. ಹೆಚ್ಚಿನ ಬಸ್‌ಗಳನ್ನು ಗಂಗಾವತಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಆರಂಭವಾಗಿದ್ದು, ನೈಜ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ಶ್ರೀನಿವಾಸ್ ತಿಳಿಸಿದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!