🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 05/09/2026
ಅನ್ನದಾನೀಶ್ವರ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ , ಸೂಳೆಕಲ್ ಭುವನೇಶ್ವರ ತಾತನವರು, ಹಾಗೂ ಗಡ್ಡಿ ಶ್ರೀ
ಗಂಗಾವತಿ: ದಾನವ ಕೃತ್ಯದಲ್ಲಿ ತೊಡಗಿದ್ದ ಕಾಡುಗಳ್ಳ ಅನಕ್ಷರಸ್ಥರಿಗೆ ಅಕ್ಷರ, ಅನ್ನವನ್ನಿಕ್ಕಿ ದಾನೀಶ್ವರನಾದ ಶ್ರೀ ಅನ್ನದಾನೀಶ್ವರ ಮಹಾತ್ಮರ ಜೀವನಾಧಾರಿತ ಚಿತ್ರವು ಮಾನವೀಯ ಮೌಲ್ಯಗಳನ್ನು ಸಾರುವ ಮೂಲಕ ಅಂತಃಕರಣ ಮಿಡಿಯುವಂತಿದೆ. ಸೆ.25ರಂದು ಚಿತ್ರ ಬಿಡುಗಡೆಯಾಗಲಿದ್ದು, ಸಾರ್ವಜನಿಕರು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿ ಗೌರಿ ಎಲ್. ರಾಮನಗೌಡ ಹೇಳಿದರು.

ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.

ಕಷ್ಟಪಟ್ಟು ಚಿತ್ರವನ್ನು ನಿರ್ಮಿಸಲಾಗಿದ್ದು, ಬೇವಿನಾಳ್ ಸಂಜಯ್ ಕುಮಾರ್ ಬೆಂಗಳೂರು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ವಿ.ಮನೋಹರ್ ಅವರ ಸೊಗಸಾದ ಸಂಗೀತವಿದ್ದು, ಖ್ಯಾತ ಗಾಯಕರಾದ ರವೀಂದ್ರ ಸುರೆಗಾವಿ, ಎಂ.ಡಿ. ಪಲ್ಲವಿ, ಸಚಿನ್, ಪ್ರಜ್ವಲ್ ಹಾಗೂ ಅಭಿಷೇಕ್ ಅವರು ಭಾವತುಂಬಿ ಹಾಡಿದ್ದಾರೆ. ಶಿವಶರಣ ವಿ. ಸುಗ್ನಳ್ಳಿ ಹಾಗೂ ಸಿದ್ದರಾಜು ಅವರ ಅತ್ಯಾಕರ್ಷಕ ಕೆಮೆರಾ ಕೈಚಳಕದಲ್ಲಿ ಸಿದ್ದಗಂಗಮಠ, ಶ್ರೀರಂಗಪಟ್ಟಣ, ಕಪ್ಪತಗುಡ್ಡ, ಕೌಲೂರು ಹಾಗೂ ಮುಂಡರಗಿಯ ಸುತ್ತಮುತ್ತಲಿನ ಮನಮೋಹಕ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಸಾಹಿತಿ ಹಾಗೂ ಶಿಕ್ಷಕ ಬೇವಿನಾಳ್ ಸಂಜಯ್ ಕುಮಾರ್ ಬೆಂಗಳೂರು ಮಾತನಾಡಿ, ಎನ್.ಎಂ. ವಿಶ್ವ ಕಪ್ಪತಗಿರಿ ಅವರ ಅತ್ಯುತ್ತಮ ಸಂಕಲನವಿದೆ. ಖ್ಯಾತ ನಟ ಅಬಿಜಿತ್ರಾವ್, ಮುಂಡರಗಿಯ ಅನ್ನದಾನೀಶ್ವರ ಶಾಖಾ ಮಠ ಕುಕನೂರಿನ ಪರಮಪೂಜ್ಯ ಶ್ರೀ ಡಾಕ್ಟರ್ ಮಹಾದೇವದೇವರು ಹಾಗೂ ತಾವರಗೆರೆಯ ಪೂಜ್ಯ ಶ್ರೀ ಮಹೇಶ್ವರ ಹಿರೇಮಠ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಡಿಂಗ್ರಿ ನಾಗರಾಜ್, ಮೂಗು ಸುರೇಶ್, ಮೀನಾಕ್ಷಿ, ಅನುರಾಧ, ಶಿವಕುಮಾರ್ ಆರಾಧ್ಯ, ಸುಂದರ್, ರತ್ನಮಾಲಾ, ಹಳ್ಳಿಮೇಸ್ಟ್ರು ಖ್ಯಾತಿಯ ಕಪ್ಪೆರಾಯ, ಗಂಗಾವತಿಯ ಖ್ಯಾತ ನಟ ನಾಗರಾಜ್ ಇಂಗಳಗಿ, ವಿಷ್ಣುತೀರ್ಥ ಜೋಷಿ ಹಾಗೂ ವಕೀಲ ದಿವಂಗತ ಲಿಂಗಪ್ಪ ಸುದ್ದಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಪಣೀಶ್ ಹಾಗೂ ಈಶ್ವರ್ ಮೇಕಪ್, ಕೃಷ್ಣ ವಸ್ತ್ರಾಲಂಕಾರ ಹಾಗೂ ಲೋಕಪ್ರೀಯ ಮತ್ತು ಮಂಜುನಾಥ ಗೋರಡೆ ಕಲಾ ನಿರ್ದೇಶನ ನೀಡಿದ್ದಾರೆ. ಚಿತ್ರವು ಪ್ರೇಕ್ಷಕರನ್ನು ಒಂದೇ ಉಸಿರಿನಲ್ಲಿ ನೋಡಿಸಿಕೊಂಡು ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಸಂಗಮೇಶ ಅಪ್ಪಾಜಿ ಗಡ್ಡಿ ಮಾತನಾಡಿ, ಮುಂಡರಗಿಯ ಶ್ರೀ ಅನ್ನದಾನೀಶ್ವರ ಶ್ರೀಗಳ ಜೀವನ ಚರಿತ್ರೆ ದೈವೀಕತೆಯಿಂದ ಕೂಡಿದ್ದು, ಸಾಮಾಜಿಕ ಕಾರ್ಯಗಳ ಮೂಲಕ ಬಡವರ ಹಸಿವು ಹಾಗೂ ಅಕ್ಷರದಾಹವನ್ನು ತಣಿಸಿ, ಪ್ರಕೃತಿಯನ್ನು ಉಳಿಸಿದ ಮಹಾನ್ ಚೇತನರಾಗಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಗೌರಿ ಮತ್ತು ಬೇವಿನಾಳ್ ಸಂಜಯ್ ಕುಮಾರ್ ಅವರು ಹೆಚ್ಚಿನ ಪರಿಶ್ರಮದಿಂದ ಚಿತ್ರವನ್ನು ರೂಪಿಸಿದ್ದಾರೆ. ಸಾರ್ವಜನಿಕರು ಚಿತ್ರಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ಹಾರೈಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾವರಗೆರೆಯ ಪೂಜ್ಯ ಶ್ರೀ ಮಹೇಶ್ವರ ಹಿರೇಮಠ, ಮಂಗಳಮ್ಮ ಜೋಗತಿ ಬೆಂಗಳೂರು, ಆರ್.ಬಿ. ಪಾಟೀಲ್ ಹಾಗೂ ನಟ ವಿಷ್ಣುತೀರ್ಥ ಜೋಷಿ ಉಪಸ್ಥಿತರಿದ್ದರು.
ಚಿತ್ರಕ್ಕೆ ಪ್ರೋತ್ಸಾಹಿಸಿ: ಸುಳೇಕಲ್ ಶ್ರೀ, ಪರಣ್ಣ
ನೈತಿಕತೆ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಮಾಜಕ್ಕೆ ಸ್ಫೂರ್ತಿ ನೀಡುವ ಚಿತ್ರಗಳು ವಿರಳವಾಗಿವೆ. ಸಮಾಜ ತಿದ್ದುವ ಕಾಯಕದಲ್ಲಿ ತೊಡಗಿರುವ ವೀರಶೈವ ಸಮಾಜದ ಮುಂಡರಗಿಯ ಶ್ರೀ ಅನ್ನದಾನೀಶ್ವರ ಮಹಾತ್ಮೆ ಚಿತ್ರ ಸೆ.25ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಗಂಗಾವತಿಯ ಶಿವೇ ಚಿತ್ರಮಂದಿರದಲ್ಲಿಯೂ ಚಿತ್ರ ಪ್ರದರ್ಶನಗೊಳ್ಳಲಿದ್ದು, ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಸೂಳೆಕಲ್ ಭುವನೇಶ್ವರ ತಾತನವರು ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿಯವರು ಮನವಿ ಮಾಡಿದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ