🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 07/09/2026
“ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ; 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ”
ಗಂಗಾವತಿ: ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ತಮ್ಮ ಸಾಮಾಜಿಕ ಜಾಲತಾಣದ ಫೇಸ್ಬುಕ್ ಖಾತೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ನೇರವಾಗಿ ಉಪಚುನಾವಣೆಯ ಸವಾಲು ಹಾಕಿದ್ದಾರೆ.
“ಲೇ…! ಜನಾರ್ದನರೆಡ್ಡಿ, ಲೇ…! ಚಂಚಲಗುಡ ಕೈದಿ ನಂ. 697, ಅಲೆ ಲೇ… ಜೈಲಿನಲ್ಲಿ ಮುದ್ದೆ ಮುರಿದ ಗಣಿ ಲೂಟಿಕೋರ” ಎಂದು ಆಕ್ರೋಶ ವ್ಯಕ್ತಪಡಿಸಿರುವ ತಂಗಡಗಿ, “ಹೀಗೆಲ್ಲಾ ನಾನೂ ಕೂಡ ‘ಲೇ’ ಎನ್ನಬಲ್ಲೆ. ಘನತೆ, ನಡತೆಯಲ್ಲಿ ಅಲ್ಲದಿದ್ದರೂ ವಯಸ್ಸಿನಲ್ಲಿ ನೀವು ಹಿರಿಯ. ಜೊತೆಗೆ ನನ್ನ ಹಿರಿಯರು ಸಂಸ್ಕಾರ ಕಲಿಸಿರುವುದರಿಂದ ‘ಲೇ’ ಎನ್ನುವ ಮಟ್ಟಕ್ಕೆ ನಾ ಇಳಿಯಲಾರೆ” ಎಂದು ತಿರುಗೇಟು ನೀಡಿದ್ದಾರೆ.
“ನಾನು ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಾಗ ತಮ್ಮುಡು, ತಮ್ಮುಡು ಎಂದು ಗೋಗರೆದು ಬೆಂಬಲ ಕೇಳಿದವನು ನೀನು. ಈಗ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಬೊಗಳೆ ಬಿಡುತ್ತಿದ್ದೀಯಾ?” ಎಂದು ಪ್ರಶ್ನಿಸಿರುವ ಅವರು, “ಯಪ್ಪಾ ಬೊಗಳೆ ವೀರ, ನಿನಗೆ ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ. ನೀನು ರಾಜೀನಾಮೆ ಕೊಟ್ಟ 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ. ಗಂಗಾವತಿಯಲ್ಲಿ ನನ್ನ ವಿರುದ್ಧ ಉಪ ಚುನಾವಣೆ ಎದುರಿಸಿ ನಿನ್ನ ಬಲಾಬಲ ತೋರಿಸು. ಪ್ರಚಾರ ಶೋಕಿಗೆ ವ್ಯರ್ಥ ಪ್ರಲಾಪ ಮಾಡಬೇಡ” ಎಂದು ಸವಾಲು ಹಾಕಿದ್ದಾರೆ.
“ನಿನಗೆ ನೇರ ಸವಾಲು ಹಾಕಿ ಪಂಥಾಹ್ವಾನ ನೀಡುತ್ತಿದ್ದೇನೆ. ನೀನು ‘ಎಸ್’ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ. ಜನಾದೇಶ ಲೂಟಿಕೋರನಿಗೋ? ಜನ ಸೇವಕನಿಗೋ? ನೋಡೇ ಬಿಡೋಣ” ಎಂದು ತಂಗಡಗಿ ಘೋಷಿಸಿದ್ದಾರೆ.
ಗಣಿ ಲೂಟಿಯ ಅಕ್ರಮ ಸಂಪತ್ತಿನಿಂದ ಅಹಂಕಾರ ನೆತ್ತಿಗೇರಿದೆ ಎಂದು ಆರೋಪಿಸಿರುವ ಅವರು, “ಗಣಿ ಲೂಟಿ ಕಳ್ಳ ಎಂದ ಕೂಡಲೇ ನೀನು ಉರಿದು ಬೀಳುತ್ತಿದ್ದೀಯ. ನೀನೇನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ ಮಹನೀಯನಾ? ಜೈಲಿನಿಂದ ಹೊರ ಬರಲೂ ಕಳ್ಳಾಟ ಮಾಡಿದ ಭೂಪ ತಾನೇ?” ಎಂದು ಕಿಡಿಕಾರಿದ್ದಾರೆ.
“ಗಣಿ ಲೂಟಿ ಮಾಡಿ ಜೈಲಿಗೆ ಹೋಗಿಲ್ಲ ಎಂದರೆ ‘ಫೀಲ್ ದಿ ಜೈಲ್’ ಪ್ಯಾಕೇಜ್ ಮೇಲೆ ಹೋಗಿದ್ಯಾ? ಅಥವಾ ‘ಜಯ ಜನಾರ್ಧನ ಕೃಷ್ಣ ರಾಧಿಕಾಪತೇ’ ಅಂತ ಕೃಷ್ಣಜನ್ಮಾಷ್ಟಮಿ ದಿನ ಕೃಷ್ಣನ ಭಜನೆ ಮಾಡಿದ್ದಕ್ಕೆ ನಿನ್ನನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳಿಸಿದರಾ?” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, “ಗಣಿ ಲೂಟಿ ಕಳ್ಳ ನೀನು. ಸುಂಕಲಮ್ಮ ದೇವಸ್ಥಾನ ಒಡೆದ ಅವಿವೇಕಿ ನೀನು” ಎಂದು ಆರೋಪಿಸಿರುವ ತಂಗಡಗಿ, ಗಂಗಾವತಿಯಲ್ಲಿ ಗೆದ್ದರೆ ಮತದಾರರಿಗೆ ಡಬಲ್ ಬೆಡ್ ರೂಮ್ ಮನೆ ನೀಡುತ್ತೇನೆ, ಕ್ರಿಕೆಟ್ ಸ್ಟೇಡಿಯಂ ಮಾಡುತ್ತೇನೆ ಎಂದು ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
“ಸುಳ್ಳು ಹೇಳಿಕೊಂಡು ಜೀವನ ಮಾಡೋ ನಿನಗೆ ಇಷ್ಟಿರುವಾಗ ಸ್ವಾಭಿಮಾನದಿಂದ ಬೆಳೆದವನು ನನಗೆ ಎಷ್ಟಿರಬೇಡ?” ಎಂದು ತಿರುಗೇಟು ನೀಡಿರುವ ಅವರು, “ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಹೇಳಿಕೊಳ್ಳುತ್ತಾ ಇದ್ದೀಯ. ನಾಚಿಕೆ ಆಗಲ್ವಾ? ನಾನು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ರೆ ನಿನ್ನ ಬಂಡವಾಳ ಬಟಾಬಯಲು ಆಗುತ್ತದೆ. ಕತ್ತಲೆ ಲೋಕದ ಕರಾಳ ಮುಖ ಕಳಚಿ ಬೀಳುತ್ತದೆ ಹುಷಾರು” ಎಂದು ಎಚ್ಚರಿಕೆ ನೀಡಿದ್ದಾರೆ.
ಪಕ್ಷೇತರ ಶಾಸಕರ ಬೆಂಬಲದಿಂದ ಜನಾರ್ದನ ರೆಡ್ಡಿ ಸಚಿವರಾದರು ಎಂದು ಆರೋಪಿಸಿರುವ ತಂಗಡಗಿ, “ನನಗೆ ಹಣ ಕೊಟ್ಟಿದ್ದೆ ಎಂದಿದ್ದೀಯ. ನಿನ್ನಂತಹ ಅಡ್ಡಾದಿಡ್ಡಿ ದಾರಿಯಲ್ಲಿ ಹಣ ಸಂಪಾದಿಸಿದ ಅಡ್ನಾಡಿ ಬಳಿ ಹಣ ಪಡೆಯುವ ದುರ್ದೈವ ನನಗೆ ಬಂದಿಲ್ಲ” ಎಂದು ಹೇಳಿದ್ದಾರೆ.
“ನಾನು ಪಕ್ಷೇತರನಾಗಿ ಗೆದ್ದಾಗ ನನ್ನ ಮನೆ ಮುಂದೆ ಕಾದು ಕುಳಿತವರು ನಿನ್ನ ಪಟಾಲಂ. ಅದನ್ನು ಮರೆಯಬೇಡ. ತಮ್ಮುಡು-ತಮ್ಮುಡು ಎಂದು ಗೋಗರೆದು, ಗೆಲುವಿನ ಸಂಭ್ರಮದಲ್ಲಿದ್ದ ನನ್ನನ್ನು ಕಾಲಿಗೆ ಚಪ್ಪಲಿ ಹಾಕಲೂ ಬಿಡದೇ ನಿಮ್ಮವರು ನನ್ನನ್ನು ಕರೆದುಕೊಂಡು ಬಂದರು. ನನ್ನ ಬೆಂಬಲ ತೋರಿಸಿ ನೀವು ಅಣ್ಣ ತಮ್ಮ ಇಬ್ಬರೂ ಮಂತ್ರಿ ಆಗಿದ್ದೀರಿ” ಎಂದು ಹಳೆಯ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ್ದಾರೆ.
“ನೀನು ಯಾವ ಪುಟ್ಗೋಸಿ ಪಕ್ಷ ಸಂಘಟನೆ ಮಾಡಿದ್ದೀಯ ಅಂತ ನಿನ್ನ ಮನೆಗೆ ಎರಡು ಸಚಿವ ಸ್ಥಾನ ನೀಡಿದರು. ಅದೆಲ್ಲವೂ ನಾನು ಕೊಟ್ಟ ಬೆಂಬಲ ಹಾಗೂ ನನ್ನ ಕನಕಗಿರಿ ಕ್ಷೇತ್ರದ ಜನತೆ ನಿನಗೆ ನೀಡಿದ ಭಿಕ್ಷೆ” ಎಂದು ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಯಡಿಯೂರಪ್ಪ ಅವರನ್ನು ಬ್ಲಾಕ್ಮೇಲ್ ಮಾಡಿದ ಆರೋಪವನ್ನೂ ಪ್ರಸ್ತಾಪಿಸಿರುವ ಅವರು, “ನಮ್ಮ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿದ ಎಡಬಿಡಂಗಿ ಗಿರಾಕಿ ನೀನು. ನನಗೆ ಕರೆ ಮಾಡಿ ದಮ್ಮಯ್ಯ ಎಂದು ಬೇಡಿಕೊಂಡವನು ಈಗ ನಾನು ನಿನ್ನ ಕಾಲಿಗೆ ಬಿದ್ದೆ ಎಂದು ಬಾಲ ಬಿಚ್ಚುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ.
ಕಳೆದ ರಾಜ್ಯಸಭಾ ಚುನಾವಣೆಯ ವಿಚಾರವನ್ನೂ ಮುಂದಿಟ್ಟಿರುವ ತಂಗಡಗಿ, “ನಿನಗೆ ತಾಕತ್ತಿದ್ದರೆ ಕಳೆದ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ನನಗೆ ಎಷ್ಟು ಕರೆ ಮಾಡಿದ್ದೀಯ? ಯಾರಿಗೆ ವೋಟ್ ಹಾಕಿದ್ಯಾ? ಕಾಲ್ ಲಿಸ್ಟ್ ತೆಗೆದು ಬಹಿರಂಗ ಪಡಿಸು. ನಿನ್ನ ಯೋಗ್ಯತೆ, ಪಕ್ಷವಿರೋಧಿ ಬೂಟಾಟಿಕೆ ರಾಜ್ಯದ ಜನತೆಗೆ ಹಾಗೂ ನಿನ್ನ ಬಿಜೆಪಿ ಪಕ್ಷದವರಿಗೆ ತಿಳಿಯಲಿ” ಎಂದು ಸವಾಲು ಹಾಕಿದ್ದಾರೆ.
“ಪುಂಗು ಅಂದ್ರೆ ಹೆಂಗ್ ಪುಂಗ್ಲಿನೇ ಮೀರಿಸೋ ಥರ ನನಗೆ ಹಣ ನೀಡಿದ್ದೇನೆ ಅಂದಿದ್ದೀಯ. ನಿನ್ನ ಮಿಥ್ಯ ಸಾಧನೆ ಜನರಿಗೆ ತಿಳಿದಿದೆ. ನಿನಗೆ ಕಿಂಚಿತ್ ಮಾನ ಮರ್ಯಾದೆ ಇದ್ದರೂ ನನ್ನ ಸವಾಲು ಸ್ವೀಕರಿಸು” ಎಂದು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಶಿವರಾಜ ಎಸ್. ತಂಗಡಗಿ ಅವರು ಜನಾರ್ದನ ರೆಡ್ಡಿಗೆ ತೀಕ್ಷ್ಣ ಸವಾಲು ಹಾಕಿದ್ದಾರೆ.
ಈ ಮೂಲಕ ಗಂಗಾವತಿ ರಾಜಕೀಯ ವಲಯದಲ್ಲಿ ಇಬ್ಬರು ನಾಯಕರ ನಡುವಿನ ವಾಗ್ದಾಳಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಂಗಡಗಿ ಹಾಕಿರುವ “ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾ; 24 ಗಂಟೆಯಲ್ಲಿ ನಾನೂ ರಾಜೀನಾಮೆ ಕೊಡುತ್ತೇನೆ” ಎಂಬ ಸವಾಲು ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.




ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ