October 16, 2026

ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/09/2026

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾಯಿತ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ವಿರುದ್ಧ ಸಲ್ಲಿಸಲಾಗಿರುವ ಉದ್ದೇಶಪೂರ್ವಕ ದೂರುಗಳನ್ನು ಪರಿಗಣಿಸದಂತೆ ಹಾಗೂ ಸುಳ್ಳು ಆರೋಪಗಳ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್–2 ತಹಸೀಲ್ದಾರ್ ವೆಂಕಟೇಶ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮುಕ್ಕುಂದಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸುಮಾರು 95 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ರಾಜ್ಯದಾದ್ಯಂತ ಜಿಲ್ಲೆ ಹಾಗೂ ತಾಲೂಕು ಘಟಕಗಳ ಮೂಲಕ ಪತ್ರಕರ್ತರ ಹಕ್ಕುಗಳು, ವೃತ್ತಿಪರ ಸಮಸ್ಯೆಗಳು ಮತ್ತು ಕ್ಷೇಮಾಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಂಘದ ನಿಯಮಾನುಸಾರ ನಡೆದ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಶಿವಾನಂದ ತಗಡೂರು ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂಘದ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಕೆಲವರು ರಾಜ್ಯಾಧ್ಯಕ್ಷರ ವಿರುದ್ಧ ವಿವಿಧ ದೂರುಗಳನ್ನು ಸಲ್ಲಿಸಿರುವುದು ಗಮನಕ್ಕೆ ಬಂದಿದೆ ಎಂದರು.

ಸಂಘದ ಚುನಾಯಿತ ನಾಯಕತ್ವದ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ದೂರುಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಅನುಮಾನವಿದೆ. ಹೀಗಾಗಿ ಯಾವುದೇ ದೂರು ಅಥವಾ ಆರೋಪವನ್ನು ಏಕಪಕ್ಷೀಯವಾಗಿ ಪರಿಗಣಿಸದೆ, ಸಂಬಂಧಿಸಿದ ದಾಖಲೆಗಳು ಹಾಗೂ ವಾಸ್ತವಾಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಲ್ಲದೆ, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ವ್ಯಕ್ತಿ ಅಥವಾ ಸಂಘಟನೆಯ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನಗಳು ಖಂಡನೀಯವಾಗಿದ್ದು, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೇಸಾಯಿ, ಗೌರವ ಅಧ್ಯಕ್ಷ ನಾಗರಾಜ ಇಂಗಳಗಿ, ತಾಲೂಕು ಉಪಾಧ್ಯಕ್ಷ ಹರೀಶ್ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಿವಪ್ಪ ನಾಯಕ, ಸಹ ಕಾರ್ಯದರ್ಶಿ ವಿಜಯಕುಮಾರ ಸಣಾಪೂರ, ಖಜಾಂಚಿ ಬಿ. ದೇವರಾಜ, ಹಿರಿಯ ಪತ್ರಕರ್ತರಾದ ವಿ.ಎಸ್. ಪಾಟೀಲ್, ಕೃಷ್ಣ ವೀರಾಪೂರ, ಕೆ. ನಿಂಗಜ್ಜ, ಸುದರ್ಶನ ವೈದ್ಯ, ವೆಂಕಟೇಶ ಮಾಂತಾ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ವಸಂತಕುಮಾರ, ಶರಣಯ್ಯಸ್ವಾಮಿ, ಸಂಘಟನೆಯ ಪದಾಧಿಕಾರಿಗಳಾದ ಶರಣಪ್ಪ ಉಪ್ಪಾರ, ರಮೇಶ ಜೋಗಿನ್, ಮಂಜುನಾಥ ಗುಡ್ಲಾನೂರ, ದಿವಾಕರ್ ನಾಯಕ , ರಗಡಪ್ಪ, ಟಾಕಪ್ಪ, ಮಹೇಶ t ನಾಯಕ, ಹೇಮಂತಕುಮಾರ, ದೇವರಾಜ ಹಾಗೂ ಇತರಿದ್ದರು. ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!