October 16, 2026

ಬರಗಾಲ ಪರಿಹಾರಕ್ಕೆ ಎಕರೆಗೆ ₹40 ಸಾವಿರ ನೀಡಲು ರೈತರ ಆಗ್ರಹ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/09/2026

ಗಂಗಾವತಿ: ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೊಡ್ಡ ಬಸವನಗೌಡ ಮಾಲಿ ಪಾಟೀಲ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ರೈತ ಸಂಘಟನೆಯ ವತಿಯಿಂದ ಗುರುವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು.

ಬರಗಾಲದ ಕುರಿತು ಸರಕಾರ ಕೇವಲ ಸಮೀಕ್ಷೆ ನಡೆಸಿ ರೈತರನ್ನು ಸಮಾಧಾನಪಡಿಸುವ ಕೆಲಸ ಮಾಡುತ್ತಿದೆ. ಬರಗಾಲ ಘೋಷಣೆ ಮಾಡುವುದರ ಜೊತೆಗೆ ರೈತರಿಗೆ ಅಗತ್ಯ ಪರಿಹಾರ ನೀಡಬೇಕು.  ನೀರಿನ ಕೊರತೆಯಿಂದಾಗಿ ಸದ್ಯ ರೈತರು ಮೂರು ತಿಂಗಳ ಬೆಳೆದ ಸಸಿಗಳನ್ನು ನಾಟಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೆಳೆ ಸರಿಯಾಗಿ ಬೆಳೆಯದೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 40 ಟಿಎಂಸಿ ನೀರು ಲಭ್ಯವಿರುವ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತಿತ್ತು.

ಒಂದು ಎಕರೆ ಬೆಳೆ ಬೆಳೆಯಲು ಸುಮಾರು 30 ಸಾವಿರ ವೆಚ್ಚವಾಗುತ್ತದೆ. ಆದರೆ ಇಳುವರಿ ಇಲ್ಲದೆ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಸರಕಾರ ರೈತರ ನೆರವಿಗೆ ಧಾವಿಸಿ ಎಕರೆಗೆ 40 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಅಷ್ಟೇ ಅಲ್ಲದೆ ಗೊಬ್ಬರದ ಬೆಲೆಯನ್ನು ಸಹ ಇಳಿಕೆ ಮಾಡಬೇಕು. ಬರಗಾಲದ ಪರಿಣಾಮ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರಗಳು ಕೂಡಲೇ ಪರಿಣಾಮಕಾರಿ ಕ್ರಮ ಕೈಗೊಂಡು ರೈತರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ರೈತ ಪರ ಹೋರಾಟ ಸಂಘಟನೆಯ ರಾಜ್ಯಾಧ್ಯಕ್ಷರಾದ ದೊಡ್ಡ ಬರಮಪ್ಪ, ರೈತರಾದ ಹೆಬ್ಬಾಳ ಮಲ್ಲೇಶ್, ಹುಸೇನಸಾಬ್, ರಮೇಶ ನಾಯಕ ಹಾಗೂ ಮಹೇಶ ನಾಯಕ ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!