ವಿಶೇಷ ವರದಿ: ( ಮಹೇಶ ಟಿ ನಾಯಕ )
🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/09/2026
ಗಂಗಾವತಿ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ವಿವಿಧ ಕೆಲಸಗಳಿಗಾಗಿ ಪ್ರತಿನಿತ್ಯ ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರದಾಡುವಂತಾಗಿದೆ.
ದೂರದ ಹಳ್ಳಿಗಳಿಂದ ಬರುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆಯೇ ಇಲ್ಲ. ಕಚೇರಿಯಲ್ಲಿರುವ ಕೆಲ ಆಸನಗಳೂ ಮುರಿದುಹೋಗಿದ್ದು, ವೃದ್ಧರು, ಗರ್ಭಿಣಿಯರು ಹಾಗೂ ಮಹಿಳೆಯರು ಗಂಟೆಗಟ್ಟಲೆ ನಿಂತುಕೊಂಡೇ ತಮ್ಮ ಕೆಲಸಕ್ಕಾಗಿ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ, ಉರಿಬಿಸಿಲಿನಲ್ಲಿ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಸಾರ್ವಜನಿಕರ ದಾಹ ನೀಗಿಸಬೇಕಾದ ನೀರು ಶುದ್ಧೀಕರಣ ಘಟಕವೇ ದಾಖಲೆಗಳು ಹಾಗೂ ಇತರೆ ಸಾಮಗ್ರಿಗಳನ್ನು ಇಡುವ ಜಾಗವಾಗಿ ಬಳಕೆಯಾಗುತ್ತಿರುವ ಆರೋಪ ಕೇಳಿಬಂದಿದೆ. ಜನರ ಆರೋಗ್ಯದ ದೃಷ್ಟಿಯಿಂದ ಇರಬೇಕಾದ ವ್ಯವಸ್ಥೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶೌಚಾಲಯದ ಪರಿಸ್ಥಿತಿಯಂತೂ ಮತ್ತಷ್ಟು ಗಂಭೀರವಾಗಿದೆ. ಸಾರ್ವಜನಿಕರಿಗೆ ಅಗತ್ಯವಿರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದ್ದು, ಅನಿವಾರ್ಯವಾಗಿ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಮಹಿಳೆಯರು ತೀವ್ರ ಮುಜುಗರ ಹಾಗೂ ಸಂಕಷ್ಟ ಅನುಭವಿಸುವಂತಾಗಿದೆ. ಮಹಿಳಾ ಅಧಿಕಾರಿಗಳೇ ಆಡಳಿತ ನಡೆಸುತ್ತಿರುವ ಕಚೇರಿಯಲ್ಲಿ ಮಹಿಳೆಯರ ಮೂಲಭೂತ ಅಗತ್ಯಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಇದರ ಜೊತೆಗೆ ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಕಚೇರಿಗೆ ಬರುವ ಕಾರು, ಬೈಕ್ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ವಾಹನಗಳ ನಡುವೆ ಸಿಲುಕಿಕೊಂಡ ಬೈಕ್ಗಳನ್ನು ಹೊರತೆಗೆಯಲು ವಾಹನ ಮಾಲೀಕರನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಸಮಯವೂ ವ್ಯರ್ಥವಾಗುತ್ತಿದೆ.
ಒಂದೆಡೆ ಜನಸೇವೆಯ ಕಚೇರಿ ಎಂದು ಹೇಳಿಕೊಳ್ಳುವ ತಹಸೀಲ್ದಾರ್ ಕಚೇರಿ, ಮತ್ತೊಂದೆಡೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರಿಗೆ ಸಂಕಷ್ಟದ ಕೇಂದ್ರವಾಗಿರುವುದು ವಿಪರ್ಯಾಸವಾಗಿದೆ. ಈ ಅವ್ಯವಸ್ಥೆಗಳಿಗೆ ತಕ್ಷಣ ಕಡಿವಾಣ ಹಾಕಿ, ಕುಡಿಯುವ ನೀರು, ಶೌಚಾಲಯ, ಆಸನ ಹಾಗೂ ಪಾರ್ಕಿಂಗ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಹಸೀಲ್ದಾರ್ ವಸಂತಕುಮಾರಿ ಅವರು ಈ ಸಮಸ್ಯೆಗಳತ್ತ ತಕ್ಷಣ ಗಮನಹರಿಸಿ, ಸಾರ್ವಜನಿಕರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಜನಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತಷ್ಟು ಚರ್ಚೆಗೆ ಗ್ರಾಸವಾಗಲಿದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ವರದಿ ಪ್ರಕಟವಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವವರೇ ಕಾದು ನೋಡಬೇಕಾಗಿದೆ ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ವರದಿ ಮುಂದುವರೆಯಲಿದೆ
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ