🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 10/09/2026
ಗಂಗಾವತಿ: ನಾಡಿನ ಪ್ರಮುಖ ಇತಿಹಾಸ, ಪುರಾತತ್ವ ಶಾಸ್ತ್ರಜ್ಞ, ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಹಾಗೂ ಬರಹಗಾರರಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಕೊಪ್ಪಳ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಕನ್ನಡ ಮನಸ್ಸುಗಳಿಗೆ ಸಂತಸ ತಂದಿದೆ ಎಂದು ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದವರಾದ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಪ್ರಸ್ತುತ ಗಂಗಾವತಿಯ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಎಂ.ಫಿಲ್ ಹಾಗೂ ಶಾಸನಶಾಸ್ತ್ರ ಡಿಪ್ಲೊಮಾ ಪದವಿ ಪಡೆದಿರುವ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ‘ಕೊಪ್ಪಳ–ಹಂಪಿ ಪ್ರದೇಶದ ಪ್ರಾಗಿತಿಹಾಸ ಕಾಲದ ಕಲೆ’ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ‘ಕನಕಗಿರಿಯ ಇತಿಹಾಸ ಮತ್ತು ಕಲೆ’ ಇವರ ಎಂ.ಫಿಲ್ ಅಧ್ಯಯನದ ವಿಷಯವಾಗಿತ್ತು.
ಇತಿಹಾಸ, ಪುರಾತತ್ವ ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆ ನಡೆಸಿರುವ ಕೋಲ್ಕಾರ್ ಅವರು ಶಿಲಾಯುಗದ ಗವಿಚಿತ್ರಗಳು, ವಿಜಯನಗರ ಪರಿಸರ, ಕೊಪ್ಪಳ–ಹಂಪಿ ಪ್ರದೇಶದ ಪ್ರಾಗಿತಿಹಾಸ, ಕಲ್ಯಾಣ ಕರ್ನಾಟಕದ ಪ್ರಾಗಿತಿಹಾಸ ಮತ್ತು ಆದಿಮ ಸಂಸ್ಕೃತಿ, ಗಂಗಾವತಿ ತಾಲೂಕು ದರ್ಶನ, ಗಂಗಾವತಿ ತಾಲೂಕು ಗ್ಯಾಸೆಟಿಯರ್, ಯಲಬುರ್ಗಾ ತಾಲೂಕು ಗ್ಯಾಸೆಟಿಯರ್, ವಿಜಯನಗರದ ಮಾತೃಸ್ಥಾನ ಆನೆಗೊಂದಿ, ಭವ್ಯ ಪರಂಪರೆಯ ತಾಣ ಆನೆಗೊಂದಿ ಸೇರಿದಂತೆ 13 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ.
ಇದಲ್ಲದೆ 15 ಸ್ಮರಣ ಸಂಚಿಕೆಗಳು ಹಾಗೂ ನಾಲ್ಕು ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ್ದು, ನೂರಾರು ಸಂಶೋಧನಾ ಮತ್ತು ಸಾಂಸ್ಕೃತಿಕ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣ, ಸಭೆ ಮತ್ತು ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಕೊಪ್ಪಳ–ಹಂಪಿ ಪ್ರದೇಶದಲ್ಲಿ 80ಕ್ಕೂ ಅಧಿಕ ಆದಿಮ ನೆಲೆಗಳು, ಬೂದಿದಿಬ್ಬಗಳು ಹಾಗೂ ಚಿತ್ರಿತ ಗವಿಗಳನ್ನು ಶೋಧಿಸಿ ಅಧ್ಯಯನ ನಡೆಸಿರುವ ಅವರು, 40ಕ್ಕೂ ಅಧಿಕ ಅಪ್ರಕಟಿತ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಕನಕಗಿರಿ ಪಾಳೆಯಗಾರರು, ಹುಲಿಹೈದರ್ ಸಂಸ್ಥಾನ, ಯಲಬುರ್ಗಾ ಅಮರನಾಯಕರು ಹಾಗೂ ಆನೆಗೊಂದಿ ನರಪತಿ ಸಂಸ್ಥಾನದ ಇತಿಹಾಸದ ಕುರಿತು ಸಂಶೋಧನೆ ನಡೆಸಿ ಬೆಳಕು ಚೆಲ್ಲಿದ್ದಾರೆ. ದೇವಾಲಯ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಕುರಿತೂ ಹಲವು ವಿಶ್ಲೇಷಣಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ.
ಗಂಗಾವತಿ ಭಾಗದ ಹಲವು ಕವಿ, ಬರಹಗಾರರ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಹಾಗೂ ಅಭಿಪ್ರಾಯಗಳನ್ನು ಬರೆದು ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಮೂವರು ಸಂಶೋಧಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರ ಲೇಖನವೊಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪಠ್ಯಕ್ರಮದಲ್ಲಿಯೂ ಸೇರ್ಪಡೆಯಾಗಿದೆ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರ ಸಾಹಿತ್ಯ, ಸಂಶೋಧನೆ ಹಾಗೂ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಗಂಗಾವತಿ ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ಕೊಪ್ಪಳ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಯುವಜನ ಸಮಾವೇಶದ ಸರ್ವಾಧ್ಯಕ್ಷತೆ ಸೇರಿದಂತೆ ಹಲವು ಗೌರವಗಳು ಸಂದಿವೆ. ಕೊಪ್ಪಳ ಜಿಲ್ಲಾ ಆಡಳಿತದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ, ಕನಕಾಚಲ ಪ್ರಶಸ್ತಿ, ಕರಿಸಿದ್ದ ಪ್ರಶಸ್ತಿ, ಬಸವಾನುಗ್ರಹ ಪ್ರಶಸ್ತಿ, ಸದ್ಧರ್ಮ ಪ್ರಶಸ್ತಿ, ಶರಣಶ್ರೀ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಕಣ್ಮಣಿ ಪ್ರಶಸ್ತಿ, ಕದಂಬ ಪ್ರಶಸ್ತಿ, ಶಂಕರಭಾಸ್ಕರ ಪ್ರಶಸ್ತಿ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಸಂಶೋಧನ ಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇಂತಹ ಬಹುಮುಖ ಸಾಹಿತ್ಯ, ಸಂಶೋಧನಾ ಹಾಗೂ ಸಾಂಸ್ಕೃತಿಕ ಸೇವೆ ಸಲ್ಲಿಸಿರುವ ಡಾ. ಶರಣಬಸಪ್ಪ ಕೋಲ್ಕಾರ್ ಅವರನ್ನು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಅವರ ಅರ್ಹತೆ ಮತ್ತು ದೀರ್ಘಕಾಲದ ಕನ್ನಡ ನುಡಿ ಸೇವೆಗೆ ಸಂದ ಗೌರವವಾಗಿದೆ ಎಂದು ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ತಿಳಿಸಿದ್ದಾರೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ