🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 15/09/2026
ರಂಗಭೂಮಿ ಮಕ್ಕಳಲ್ಲಿ ಜೀವನ ಮೌಲ್ಯ ಬೆಳೆಸುತ್ತದೆ: ರಮೇಶ್ ಕೆ. ಬೆಣಕಲ್
ಉಳುಮೆ ರಂಗಭೂಮಿ ಸಂಸ್ಥೆ ಉದ್ಘಾಟಿಸಿದ ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ, ಪತ್ರಕರ್ತ ನಾಗರಾಜ್ ಇಂಗಳಗಿ
ಗಂಗಾವತಿ: ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಹಾಗೂ ವಿವಿಧ ಪಾತ್ರಗಳನ್ನು ನಿರ್ವಹಿಸುವುದರಿಂದ ಮಕ್ಕಳಲ್ಲಿ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗುವುದರ ಜೊತೆಗೆ ಮೌಲ್ಯಗಳು ಬೆಳೆದು ಬರುತ್ತವೆ ಎಂದು ರಂಗಾಯಣ ಪದವೀಧರ, ನಟ ಹಾಗೂ ನಿರ್ದೇಶಕ ರಮೇಶ್ ಕೆ. ಬೆಣಕಲ್ ಹೇಳಿದರು.
ಉಳುಮೆ ರಂಗಭೂಮಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಎರಡು ತಿಂಗಳ ರಂಗಶಿಬಿರದ ಸಮಾರೋಪ ಹಾಗೂ ‘ಕಪಟ ಸನ್ಯಾಸಿ’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ರಮೇಶ್ ಕೆ. ಬೆಣಕಲ್ ಮಾತನಾಡಿದ ಅವರು, ನಾಟಕ ಕಲೆ ಮನರಂಜನೆಯ ಜೊತೆಗೆ ಮಕ್ಕಳ ಆಸಕ್ತಿಯನ್ನು ಸೃಜನಾತ್ಮಕ ಚಟುವಟಿಕೆಗಳತ್ತ ಕೊಂಡೊಯ್ಯುತ್ತದೆ. ಇದರಿಂದ ಮಾನಸಿಕ ನೆಮ್ಮದಿ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದರು.
ಉಳುಮೆ ರಂಗಭೂಮಿ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ, ಪತ್ರಕರ್ತ ನಾಗರಾಜ್ ಇಂಗಳಗಿ ನಾಟಕ ಪ್ರದರ್ಶನಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಅವರ ಬೌದ್ಧಿಕ ವಿಕಾಸನದ ಜೊತೆಗೆ ಶಾರೀರಿಕ ಮಾನಸಿಕ ಸದೃಢತೆ ಹೊಂದುತ್ತದೆ. ಜೀವನ ನಿರ್ವಹಣೆ ಕೌಶಲ್ಯವು ವೃದ್ಧಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ರುದ್ರೇಶ್ ಅರಾಳ್ ಮಾತನಾಡಿ, ನಾಟಕ ನೈಜ ಕಲೆಯಾಗಿದ್ದು, ವೇದಿಕೆಯ ಮೇಲೆ ಪಾತ್ರಗಳು ಜೀವಂತವಾಗಿ ಮೂಡಿಬಂದು ಪ್ರೇಕ್ಷಕರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ. ಮಕ್ಕಳಲ್ಲಿ ಕಲೆಯ ಮೇಲಿನ ಆಸಕ್ತಿ ಹೆಚ್ಚಿದಂತೆ ಮಾನವೀಯ ಗುಣಗಳೂ ಬೆಳೆದು ಬರುತ್ತವೆ ಎಂದು ಹೇಳಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಶ್ರೀನಿವಾಸ್ ಅಂಗಡಿ ಮಾತನಾಡಿ, ನಾಟಕವು ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ ಎಂದರು.
ಶ್ರೀ ರಾಜರಾಜೇಶ್ವರಿ ಬೃಹನ್ಮಠ ಅರಳಹಳ್ಳಿಯ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ನಿರಂತರ ಪರಿಶ್ರಮ ಹಾಗೂ ತಂಡದ ಒಗ್ಗಟ್ಟಿನಿಂದ ‘ಕಪಟ ಸನ್ಯಾಸಿ’ ನಾಟಕ ಯಶಸ್ವಿಯಾಗಿ ಮೂಡಿಬಂದಿದೆ ಎಂದು ಶುಭ ಹಾರೈಸಿದರು.
16ಕ್ಕೂ ಹೆಚ್ಚು ಪುಟ್ಟ ಮಕ್ಕಳು ಅಭಿನಯಿಸಿದ ‘ಕಪಟ ಸನ್ಯಾಸಿ’ ನಾಟಕವು ನಟನೆ, ಹಾವಭಾವ ಹಾಗೂ ಭಂಗಿಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಉಳುಮೆ ರಂಗಭೂಮಿ ಸಂಸ್ಥೆಯ ಮೊದಲ ಪ್ರಯತ್ನದಲ್ಲೇ ರಂಗಶಿಬಿರ ಆಯೋಜಿಸಿ, ಮಕ್ಕಳನ್ನು ಸಿದ್ಧಪಡಿಸಿ ನಾಟಕ ಪ್ರದರ್ಶಿಸಿದ ನಟ-ನಿರ್ದೇಶಕ ರಮೇಶ್ ಕೆ. ಬೆಣಕಲ್ ಅವರ ಶ್ರಮಕ್ಕೆ ಪ್ರೇಕ್ಷಕರು ಹಾಗೂ ಕಲಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಹನಿರ್ದೇಶಕಿ ಹಾಗೂ ವಿನ್ಯಾಸಕಿ ಸುಸ್ಮಿತಾ ಪಿ. ಮೋಹನ್, ಚಲನಚಿತ್ರ ನಿರ್ದೇಶಕ ಸ್ವರೂಪ್ ಮೈಸೂರು, ಜನಪದ ಕಲಾವಿದ ಸಾಲಿಯಾನ ಸಂತೋಷ್ ಸೇರಿದಂತೆ ರಂಗಾಸಕ್ತರು ಉಪಸ್ಥಿತರಿದ್ದರು.
ನಂತರ ಸ್ವರೂಪ್ ಮೈಸೂರು ನಿರ್ದೇಶನದ ‘ಮುದ್ದು ಮೌನ’ ಕಿರುಚಿತ್ರ ಪ್ರದರ್ಶನಗೊಂಡಿತು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ