October 16, 2026

‘ನಾನಷ್ಟೇ’ ಎಂಬುದು ಏಕಚಕ್ರಾಧಿಪತ್ಯ, ‘ನಾವಷ್ಟೇ’ ಎಂಬುದು ತಾರತಮ್ಯ; ‘ನಾವೆಲ್ಲರೂ’ ಎಂಬುದು ಪ್ರಜಾಪ್ರಭುತ್ವ: ಡಾ. ಕರಿಗೂಳಿ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 16/09/2026

ಗಂಗಾವತಿ: ನಾನಷ್ಟೇ ಎಂಬುದು ಏಕಚಕ್ರಾಧಿಪತ್ಯ, ನಾವಷ್ಟೇ ಎಂಬುದು ತಾರತಮ್ಯ, ನಾವೆಲ್ಲರೂ ಎಂಬುದು ಮಾತ್ರ ಪ್ರಜಾಪ್ರಭುತ್ವ” ಎಂದು ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗೂಳಿ ಹೇಳಿದರು.

ಗಂಗಾವತಿ ತಾಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ.15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಇಂಜಿನಿಯರ್‌ಗಳ ದಿನಾಚರಣೆಯನ್ನು ಆಚರಿಸಲಾಯಿತು.

ಸಸಿಗೆ ನೀರೆರೆಯುವ ಮೂಲಕ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಡಾ. ಶಶಿಕುಮಾರ ಅವರು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿ, ದಿನಾಚರಣೆಯ ಔಚಿತ್ಯವನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಕರಿಗೂಳಿ ಅವರು ಮಾತನಾಡಿ, ಪ್ರಜಾಪ್ರಭುತ್ವಕ್ಕೂ ಮುನ್ನ ಜಾರಿಯಲ್ಲಿದ್ದ ವಿವಿಧ ಪ್ರಭುತ್ವಗಳ ಸ್ವರೂಪಗಳನ್ನು ವಿವರಿಸಿ, ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿದರು. ಪ್ರಜಾಪ್ರಭುತ್ವದ ಮೂಲಕ ಸಹಬಾಳ್ವೆಯ ವಾತಾವರಣ ನಿರ್ಮಿಸಿ ನ್ಯಾಯಯುತ ಸಮಾಜ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ. ಅದರಲ್ಲೂ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ತಾರತಮ್ಯಗಳು ಅಂತ್ಯಗೊಂಡು ಸಮಾನತೆ ಮತ್ತು ಸಹಬಾಳ್ವೆ ಸಾಧ್ಯವಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ. ವಿರೂಪಾಕ್ಷ ಕೆ., ಉಪನ್ಯಾಸಕರಾದ ವೆಂಕಟರಾಜು, ದೇವರಾಜ, ಬಾಲಚಂದ್ರಪ್ಪ, ಈಶಪ್ಪ, ಕಲ್ಪನಾ, ರವಿಕುಮಾರ್, ರೋಜಾ, ಮಾರೆಪ್ಪ, ವಿನಯಕುಮಾರ, ಕನಕಪ್ಪ, ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ಸಹಾಯಕ ಸಿಬ್ಬಂದಿ ಶಾಂತಿ, ಶರಣಬಸವ ಸೇರಿದಂತೆ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!