October 16, 2026

ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 60 ವರ್ಷದ ಆರೋಪಿ ಬಂಧನ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 28/09/2026

ಬಾಲಕಿ ಮೇಲೆ ಪೈಶಾಚಿಕ ಕೃತ್ಯ; ತಲೆಮರೆಸಿಕೊಂಡಿದ್ದ ವೃದ್ಧನನ್ನು ಬಂಧಿಸಿದ ಪೊಲೀಸರು

ಗಂಗಾವತಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ; 60 ವರ್ಷದ ವೃದ್ಧ ಬಂಧನ

ತಾಲ್ಲೂಕಿನ ಗ್ರಾಮವೊಂದರಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಗೆ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ 60 ವರ್ಷದ ರಾಮಾಂಜನೇಯ ಸುಬ್ಬಾರಾವ್ ಎಂಬಾತನನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಸಂಜೆ ಬಾಲಕಿ ಆಟವಾಡುತ್ತಿದ್ದ ವೇಳೆ ಆರೋಪಿಯು ಆಮಿಷವೊಡ್ಡಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿ ಬಳಿಕ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಮನೆಗೆ ಮರಳಿದ ಬಾಲಕಿ ಪೋಷಕರಿಗೆ ಘಟನೆಯ ಕುರಿತು ತಿಳಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಭಾನುವಾರ ನೂರಾರು ಗ್ರಾಮಸ್ಥರು ಗ್ರಾಮೀಣ ಠಾಣೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಮುಜುಗರದ ಹಿನ್ನೆಲೆಯಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದ ಬಾಲಕಿಯ ಕುಟುಂಬಸ್ಥರಿಗೆ ಸಾರ್ವಜನಿಕರು ಧೈರ್ಯ ತುಂಬಿದ ಬಳಿಕ, ಸೋಮವಾರ ಬಾಲಕಿಯ ತಾಯಿ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಗ್ರಾಮೀಣ ಠಾಣೆ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ನಡೆಸಿದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಪಿಐ (ಸಿಂಗಂ) ರಂಗಪ್ಪ ದೊಡ್ಡಮನಿ ಹಾಗೂ ಸಿಬ್ಬಂದಿ ತಲೆಮರೆಸಿಕೊಂಡಿದ್ದ ರಾಮಾಂಜನೇಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕಿಯ ರಕ್ಷಣೆ ಹಾಗೂ ಕಾನೂನು ನಿಯಮಾವಳಿಗಳ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಗುರುತು ಮತ್ತು ಗ್ರಾಮದ ವಿವರವನ್ನು ಗೌಪ್ಯವಾಗಿಡಲಾಗಿದೆ.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!