October 16, 2026

ಬಂಡ್ರಾಳದಲ್ಲಿ ಭಾವೈಕ್ಯತೆಯ ಸಂಭ್ರಮ: ಗ್ಯಾರ್ವಿ ಶರೀಫ್ ಹಬ್ಬದಲ್ಲಿ ಹಿಂದೂ–ಮುಸ್ಲಿಂ ಬಾಂಧವ್ಯದ ಸೌಹಾರ್ದ ಸಂದೇಶ

🟥 ಟಿ ಪಬ್ಲಿಕ್ ನ್ಯೂಸ್ | ಬಂಡ್ರಾಳ
ದಿನಾಂಕ: 28/09/2026

ಗಂಗಾವತಿ: ತಾಲೂಕಿನ ಬಂಡ್ರಾಳ ಗ್ರಾಮದಲ್ಲಿ ಮೈಬು ಸುಭಾನಿ ಗ್ಯಾರ್ವಿ ಶರೀಫ್ ಹಬ್ಬವನ್ನು ಹಿಂದೂ–ಮುಸ್ಲಿಂ ಬಾಂಧವ್ಯದ ಪ್ರತೀಕವಾಗಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮುಸ್ಲಿಂ ಬಾಂಧವರು ಒಗ್ಗೂಡಿ ಜಂಡಾ ಮೆರವಣಿಗೆ ನಡೆಸಿದರು. ಜಂಡಕಟ್ಟೆಗೆ ಪುಷ್ಪಾಲಂಕಾರ ಮಾಡಲಾಗಿದ್ದು, ಗ್ರಾಮದ ಹಿಂದೂ ಮತ್ತು ಮುಸ್ಲಿಂ ಸಮಾಜದವರು ಮನೆಗೊಂದು ಹೂವಿನ ಹಾರ ತಂದು ಅಲಂಕರಿಸುವ ಮೂಲಕ ಭಕ್ತಿಭಾವ ಮೆರೆದರು.

ಹಬ್ಬದ ನಿಮಿತ್ತ ಗ್ರಾಮದಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಹಾಗೂ ಗ್ರಾಮಸ್ಥರನ್ನು ಮನೆಮನೆಗೆ ಆಹ್ವಾನಿಸಿ ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವಕ್ಕೆ ಸಾಕ್ಷಿಯಾದ ಈ ಆಚರಣೆಯಲ್ಲಿ ಎರಡೂ ಸಮುದಾಯದವರು ಸಕ್ರಿಯವಾಗಿ ಪಾಲ್ಗೊಂಡರು.

ನಾಡಿನಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ, ಉತ್ತಮ ಮಳೆ-ಬೆಳೆಯಾಗಿ ರೈತಾಪಿ ವರ್ಗದ ಬದುಕು ಹಸನಾಗಲಿ ಎಂದು ಹಿಂದೂ–ಮುಸ್ಲಿಂ ಬಾಂಧವರು ಒಗ್ಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಧರ್ಮದ ಗಡಿಗಳನ್ನು ಮೀರಿ ಮಾನವೀಯತೆ ಮತ್ತು ಸೌಹಾರ್ದಕ್ಕೆ ಆದ್ಯತೆ ನೀಡಿದ ಬಂಡ್ರಾಳ ಗ್ರಾಮದ ಆಚರಣೆಯು ಸಾಮರಸ್ಯದ ಸಂದೇಶ ಸಾರುವ ಮೂಲಕ ಧಾರ್ಮಿಕ ಏಕತೆ ಮತ್ತು ಭಾವೈಕ್ಯತೆಗೆ ಮಾದರಿಯಾಯಿತು.

ಈ ಸಂದರ್ಭದಲ್ಲಿ ನನ್ನಸಾಬ್, ಮದರ್ ಸಾಬ್, ಭಾಷಾ ಕಾರಟಗಿ, ಖಾದರ್ ಭಾಷಾ, ಭಾಷಾ ಆನೆಗೊಂದಿ, ದಸ್ತಗಿರ್ ಸಾಬ್, ಪೀರ್ ಸಾಬ್, ಅಬ್ದುಲ್ ರಹಮತ್, ಮೆಹಬೂಬ್, ನಾಗರಾಜ ಕಂಟ್ರಾಕ್ಟರ್, ಮಲ್ಲ ಪೊಲೀಸ್ ಪಾಟೀಲ್, ಹಾಗೂ ಗ್ರಾಮದ ಯುವಕರು ಮತ್ತು ಇತರರು ಇದ್ದರು

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!