October 16, 2026

ತೊಗರಿ ಬೆಳೆಯಲ್ಲಿ ಅಧಿಕ ಇಳುವರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 07/10/2026

ಗಂಗಾವತಿ: ಹವಾಮಾನ ವೈಪರೀತ್ಯದ ನಡುವೆಯೂ ಸುಧಾರಿತ ತಳಿಗಳು ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ತೊಗರಿ ಬೆಳೆಯಲ್ಲಿ ಉತ್ತಮ ಇಳುವರಿ ಹಾಗೂ ಲಾಭ ಪಡೆಯಬಹುದು ಎಂದು ಗಂಗಾವತಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಮಾಳಗಿ ಹೇಳಿದರು.

ವೆಂಕಟಗಿರಿ ರೈತ ಸಂಪರ್ಕ ಕೇಂದ್ರ ಹಾಗೂ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಲ್ಕನಮರಡಿ ಗ್ರಾಮದ ಪ್ರಗತಿಪರ ರೈತ ಶಂಕ್ರಪ್ಪ ಸಿದ್ದಪ್ಪ ಅವರ ಜಮೀನಿನಲ್ಲಿ ಆಯೋಜಿಸಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಾಯಕ ಕೃಷಿ ನಿರ್ದೇಶಕ ಡಾ. ಅಭಿಲಾಷ ಸಿ.ಆರ್. ಮಾತನಾಡಿ, ಅಲ್ಪಾವಧಿಯಲ್ಲಿ ಉತ್ತಮ ಇಳುವರಿ ನೀಡುವ ಜಿಆರ್‌ಜಿ-152 ಸೇರಿದಂತೆ ಸುಧಾರಿತ ತಳಿಗಳನ್ನು ರೈತರು ಆಯ್ಕೆ ಮಾಡಬೇಕು. ಕೃಷಿ ಭಾಗ್ಯ, ಕೃಷಿ ಸಂಸ್ಕರಣೆ, ಪಿಎಂಎಫ್‌ಎಂಇ, ಪಿಎಂ ಕಿಸಾನ್ ಸೇರಿದಂತೆ ವಿವಿಧ ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಮಲ್ಲೇಶ ಅವರು ತೊಗರಿಯಲ್ಲಿ ಇಳುವರಿ ಹೆಚ್ಚಿಸಲು ಸಾವಯವ ಗೊಬ್ಬರದೊಂದಿಗೆ ಟ್ರೈಕೋಡರ್ಮ ಬಳಕೆ, ಸೂಕ್ತ ಸಾಲು ಮತ್ತು ಗಿಡಗಳ ಅಂತರ, ಬಿತ್ತನೆಯ 35ರಿಂದ 45 ದಿನಗಳಲ್ಲಿ ಕುಡಿ ಚಿವುಟುವುದು, ರಸಗೊಬ್ಬರ ಹಾಗೂ ಲಘುಪೋಷಕಾಂಶಗಳ ಬಳಕೆ ಕುರಿತು ಮಾಹಿತಿ ನೀಡಿದರು.

ಸಸ್ಯರೋಗ ಶಾಸ್ತ್ರದ ವಿಜ್ಞಾನಿ ರೇವತಿ ಅವರು ಬೀಜ ಬಿತ್ತನೆಗೂ ಮುನ್ನ ಪ್ರತಿ ಕೆ.ಜಿ. ತೊಗರಿ ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮ ಬಳಸಿ ಬೀಜೋಪಚಾರ ಮಾಡುವುದರಿಂದ ಬೀಜದಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ನೇಟೆ ರೋಗ, ಎಲೆಚುಕ್ಕೆ ರೋಗ ಹಾಗೂ ಗೋಡು ರೋಗಗಳ ನಿಯಂತ್ರಣ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ ಶೃತಿ ಅವರು ಶೇ.50ರಷ್ಟು ಹೂಬಿಡುವ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 10 ಗ್ರಾಂ ಪಲ್ಸ್ ಮ್ಯಾಜಿಕ್ ಬೆರೆಸಿ ಸಿಂಪಡಿಸುವುದು ಹಾಗೂ 15 ದಿನಗಳ ಅಂತರದಲ್ಲಿ ಎರಡನೇ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ವೆಂಕಟಗಿರಿ ಹೋಬಳಿ ಕೃಷಿ ಅಧಿಕಾರಿ ಹರೀಶ್ ಎಸ್.ಜಿ. ಅವರು ಕೀಟನಾಶಕ ಸಿಂಪಡಿಸುವಾಗ ಮಾಸ್ಕ್, ಕನ್ನಡಕ, ಕೈಗವಸು ಹಾಗೂ ಗಟ್ಟಿ ಬೂಟು ಸೇರಿದಂತೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ರೈತರಿಗೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿ ಗಣೇಶ್, ಗಂಗಾಧರ ಹಳೆಕೋಟೆ, ಗ್ರಾಮ ಪಂಚಾಯಿತಿ ಕೃಷಿ ಸಖಿ ದ್ರಾಕ್ಷಾಯಿಣಿ ಹಾಗೂ ರೈತರಾದ ದಾನನಗೌಡ, ಹನುಮಂತಪ್ಪ, ತಿಮ್ಮಣ್ಣ, ಸೋಮನಗೌಡ, ವಿರುಪಣ್ಣ, ಬಸವರಾಜ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

Search You Tube: T Public News
error: Content is protected !!