🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 08/10/2026
ಗಂಗಾವತಿ: ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಕಾರಿ ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ಗುರುವಾರ ಗಂಗಾವತಿಯಿಂದ ಗದುಗಿನ ಪುಣ್ಯಾಶ್ರಮಕ್ಕೆ ಮರಳಿದರು.
ಕೆಲವು ತಿಂಗಳ ಹಿಂದೆ ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಂದ ಬೇಸರಗೊಂಡಿದ್ದ ಶ್ರೀಗಳು, ಗಂಗಾವತಿಯ ಶಾಖಾ ಆಶ್ರಮದಲ್ಲಿ ವಾಸ್ತವ್ಯ ಹೂಡಿ ಮೌನವ್ರತ ಆಚರಿಸುತ್ತಿದ್ದರು. ಶ್ರೀಗಳು ಪುಣ್ಯಾಶ್ರಮಕ್ಕೆ ಮರಳಬೇಕು ಎಂದು ಭಕ್ತರು ಹಾಗೂ ಶಿಷ್ಯರು ಹಲವು ಬಾರಿ ಮನವಿ ಮಾಡಿದ್ದರೂ, ಅವರು ಈವರೆಗೆ ಒಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗದುಗಿನ ರಾಜಗುರು ಶ್ರೀ ಗುರುಸ್ವಾಮಿಗಳು, ಅಂತರಾಷ್ಟ್ರೀಯ ಖ್ಯಾತಿಯ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಶ್ರೀ ಪಂ. ಎಂ. ವೆಂಕಟೇಶ್ ಕುಮಾರ್, ಶ್ರೀ ವೀರೇಶ್ ಕಿತ್ತೂರು, ಶ್ರೀ ಕಲ್ಲಿನಾಥ ಶಾಸ್ತ್ರಿ ಸೇರಿದಂತೆ ಆಶ್ರಮದ ಹಿರಿಯರು ಹಾಗೂ ಭಕ್ತರು ಗಂಗಾವತಿಗೆ ಆಗಮಿಸಿ ಕಲ್ಲಯ್ಯ ಅಜ್ಜನವರನ್ನು ಮನವೊಲಿಸಿದರು.
ಭಕ್ತರ ಪ್ರೀತಿ ಹಾಗೂ ವಿಶ್ವಾಸಕ್ಕೆ ಸ್ಪಂದಿಸಿದ ಕಲ್ಲಯ್ಯ ಅಜ್ಜನವರು ಗದುಗಿನ ಪುಣ್ಯಾಶ್ರಮಕ್ಕೆ ಮರಳಲು ಒಪ್ಪಿಗೆ ಸೂಚಿಸಿದರು. ಬಳಿಕ ಆಶ್ರಮದ ಭಕ್ತರು ಹಾಗೂ ಶಿಷ್ಯರು ಗೌರವಪೂರ್ವಕವಾಗಿ ಶ್ರೀಗಳನ್ನು ಗದಗಿಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಗಂಗಾವತಿಯ ಹಿರಿಯ ಶಿಷ್ಯರಾದ ಕೆ.ಎಫ್. ಮುದ್ದಾಬಳ್ಳಿ, ವೆಂಕಟೇಶ್ ದಾಸನಾಳ್, ಮಲ್ಲಿಕಾರ್ಜುನ ಗೌಡ ಉಡಮಕಲ್ ಸೇರಿದಂತೆ ನೂರಾರು ಶಿಷ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ಶ್ರೀಗಳನ್ನು ಹೃದಯಪೂರ್ವಕವಾಗಿ ಬೀಳ್ಕೊಟ್ಟರು.
ಕಲ್ಲಯ್ಯ ಅಜ್ಜನವರು ಪುಣ್ಯಾಶ್ರಮಕ್ಕೆ ಮರಳಿರುವುದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ