🟥 ಟಿ ಪಬ್ಲಿಕ್ ನ್ಯೂಸ್ | ಗಂಗಾವತಿ
ದಿನಾಂಕ: 07/10/2026
ಗಂಗಾವತಿ: ನಾಡಹಬ್ಬ ಮೈಸೂರು ದಸರಾ-2026ರ ಉದ್ಘಾಟಕರಾಗಿ ಆಯ್ಕೆಯಾಗಿರುವ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿದ ಆನೆಗೊಂದಿ–ಕುಮ್ಮಟದುರ್ಗದ ರಾಜ ವೀರ ಕಂಪಿಲದೇವರಾಯನ ವಂಶಸ್ಥರು ಹಾಗೂ ಗಂಡುಗಲಿ ಕುಮಾರರಾಮ ಸೇನೆಯ ಪದಾಧಿಕಾರಿಗಳು, ಕುಮ್ಮಟದುರ್ಗ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಡುಗಲಿ ಕುಮಾರರಾಮನ ಕುರಿತು ರಚಿಸಿರುವ ಪುಸ್ತಕವನ್ನು ಸ್ವಾಮೀಜಿಗಳಿಗೆ ನೀಡಿ, ದಸರಾ ಉತ್ಸವದ ಮೂಲ ಪರಂಪರೆಯ ಕುರಿತು ವಿವರಿಸಲಾಯಿತು. ಗಂಗಾವತಿ ತಾಲೂಕಿನ ಹೇಮಗುಡ್ಡ–ಕುಮ್ಮಟದುರ್ಗ ಪ್ರದೇಶದಲ್ಲಿ 14ನೇ ಶತಮಾನದಲ್ಲಿ ವೀರ ಕಂಪಿಲದೇವರಾಯ ಹಾಗೂ ಗಂಡುಗಲಿ ಕುಮಾರರಾಮರು ದುರ್ಗಾಪರಮೇಶ್ವರಿಯನ್ನು ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವವನ್ನು ಆಚರಿಸಿದ ಪರಂಪರೆಯಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
ಕುಮ್ಮಟ ಅರಸರ ಕಾಲದಲ್ಲಿ ದಸರಾ ಉತ್ಸವವು ರಾಜವೈಭವ, ಸೈನ್ಯಬಲ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರದರ್ಶನದ ಪ್ರಮುಖ ವೇದಿಕೆಯಾಗಿತ್ತು. ಕುಮ್ಮಟದುರ್ಗದ ಪತನದ ಬಳಿಕ ಹರಿಹರ–ಬುಕ್ಕರು ಆನೆಗೊಂದಿಯಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರ ಹಂಪಿಯಲ್ಲಿ ಮಹಾನವಮಿ ದಿಬ್ಬ ನಿರ್ಮಿಸಿ ದಸರಾ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು ಎಂಬ ಇತಿಹಾಸವನ್ನು ಸ್ವಾಮೀಜಿಗಳ ಗಮನಕ್ಕೆ ತರಲಾಯಿತು.
ಮುಂದಿನ ಕಾಲಘಟ್ಟದಲ್ಲಿ ದಸರಾ ಪರಂಪರೆ ಮೈಸೂರು ಸಂಸ್ಥಾನಕ್ಕೆ ತಲುಪಿ 1610ರಲ್ಲಿ ಮೈಸೂರು ಒಡೆಯರಿಂದ ಆಚರಣೆ ಮುಂದುವರಿಯಿತು. ಇಂದು ರಾಜ್ಯ ಸರ್ಕಾರದ ವತಿಯಿಂದ ನಾಡಹಬ್ಬವಾಗಿ ದಸರಾ ಆಚರಿಸಲಾಗುತ್ತಿದೆ ಎಂದು ತಿಳಿಸಲಾಯಿತು.
2026ರ ಮೈಸೂರು ದಸರಾ ಉತ್ಸವದ ಉದ್ಘಾಟಕರಾಗಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಆಯ್ಕೆ ಮಾಡಿರುವುದು ಕೊಪ್ಪಳ ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ವೀರ ಕಂಪಿಲದೇವರಾಯ, ಗಂಡುಗಲಿ ಕುಮಾರರಾಮ ಹಾಗೂ ಕುಮ್ಮಟದುರ್ಗದ ಐತಿಹಾಸಿಕ ಮಹತ್ವವನ್ನು ಸ್ಮರಿಸಿ, ಕುಮ್ಮಟದುರ್ಗ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಹೇಮಗುಡ್ಡದಲ್ಲಿ ದಸರಾ ಉತ್ಸವ ಆಚರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಆನೆಗೊಂದಿ–ಕುಮ್ಮಟದುರ್ಗದ ರಾಜ ವೀರ ಕಂಪಿಲದೇವರಾಯನ ವಂಶಸ್ಥ ಎಚ್. ರಾಜೇಶ ನಾಯಕ ದೊರೆ, ಗಂಡುಗಲಿ ಕುಮಾರರಾಮ ಸೇನೆಯ ಪ್ರಧಾನ ಕಾರ್ಯದರ್ಶಿ ಹ. ರ. ನಾಯಕ, ಷಣ್ಮುಖ ವಡ್ಡರಹಟ್ಟಿ, ಯಮನೂರ ಕಲ್ಗುಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನೈಜ ಸುದ್ದಿಗಾಗಿ – ಟಿ ಪಬ್ಲಿಕ್ ನ್ಯೂಸ್

More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ